My mother remembers and shares her memories on the days before Indian Independence and the joy felt on 15th August 1947.
Place: Kurtakoti
Script: Kannada
ಸ್ವಾತಂತ್ರ ದಿನ
ಈ ದಿನ ೭೪ನೆೇಯ (74th) ಸ್ವಾತಂತ್ರ ದಿನ . ಆನಂದದ ದಿನ ಇದಕ್ಕೆ ಹಿಂದಿನ ದಿನಗಳು ನೆನಪಿನಿಂದ ಮೇಲೆದ್ದು ಬರುತ್ತಿವೆ, ನಮ್ಮದು ಒಂದು ಚಿಕ್ಕ ಗ್ರಾಮ, ಎಲ್ಲರೂ ಕೃಷಿಯ ಮೇಲೆ ಅವಲಂಬಿತರು. ಪ್ರತಿಯೊಬ್ಬರ ಮನೆಯಲ್ಲಿ ಹಸು, ಎಮ್ಮೆಗಳಿರುತ್ತಿದ್ದವು, ಎತ್ತು ಎತ್ತಿನಗಾಡಿಗಳು ಸ್ವಲ್ಪ ಶ್ರೀಮಂತರ ಮನೆಗಳಲ್ಲಿ ಇರುತ್ತಿದ್ದವು.
ಊರಿನಲ್ಲಿ ರೈಲ್ವೆ ಸ್ಟೇಷನ್ ಇರಲಿಲ್ಲ, ಬಸ್ಸುಗಳು ಇರಲಿಲ್ಲ, ಎಂದೋ ಅಧಿಕಾರಿಗಳು ಕಾರಿನಲ್ಲಿ ಬಂದರೆ ಹುಡುಗರು ಅದರ ಹಿಂದೆ ಓಡುತ್ತಿದ್ದರು. ಎಲ್ಲರಿಗು ಮಜವೋ ಮಜ. ಪೋಸ್ಟ್ ಆಫೀಸ್ ಇರಲಿಲ್ಲ, ಹತ್ತಿರದ ಟೌನ್ ನಿಂದ ರನ್ನರ್ ಪೋಸ್ಟ್ ತರುತಿದ್ದ.
ಸಮಾಚಾರ ಪತ್ರಿಕೆಗಳಿರಲಿಲ್ಲ, ನಮ್ಮ ತಂದೆ ಹಾಗೂ ನಮ್ಮ ದೊಡ್ಡಪ್ಪ ಓದಿದವರಾದುದರಿಂದ ‘ಟೈಮ್ಸ್ ಆಫ್ ಇಂಡಿಯಾ’ (Times of India) ಬಾಂಬೆ ದಿಂದ ತರಿಸುತ್ತಿದ್ದರು. ಪೇಪರ್ ೨ – ೩ (2 – 3) ದಿನ ತಡವಾಗಿ ಊರಿಗೆ ಬರುತ್ತಿತ್ತು.
ಸ್ವತಂತ್ರ ಸಂಗ್ರಾಮ ಎಲ್ಲೆಲ್ಲೂ ನಡೆದಿತ್ತು, ನಮ್ಮೂರಿನಲ್ಲಿಯೂ ಎರಡು ಮೂರು ಜನರನ್ನು ಹಿಡಿದು ಸೆರೆಮನೆಗೆ ಕಳುಹಿಸಲಾಗಿತ್ತು.
ನಮ್ಮೂರಿನಲ್ಲಿ ೪ನೇ (4th) ತರಗತಿ (class) ವರೆಗೆ ಕನ್ನಡ ಶಾಲೆ ಹೆಣ್ಣುಮಕ್ಕಳಿಗೆ ಇತ್ತು. ಗಂಡು ಮಕ್ಕಳಿಗೆ ೭ನೇ (7th) ತರಗತಿ ವರೆಗೂ ಇತ್ತು. ನಾನು ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ೧೦(10) ವರ್ಷದ ಹುಡುಗಿ, ನಮ್ಮ ಮನೆಯಲ್ಲಿ ನಮ್ಮ ದೊಡ್ಡಪ್ಪನ ಮಕ್ಕಳು, ಸೋದರತ್ತೆಯ ಮಕ್ಕಳು ಎಲ್ಲ ಸೇರಿ ಸ್ಕೂಲಿಗೆ ಹೋಗುತ್ತಿದ್ದೆವು. ಅಲ್ಲಿ ಅನೇಕ ರಾಷ್ಟ್ರ ಭಕ್ತಿ ಗೀತೆಗಳನ್ನು ನಮಗೆ ಕಲಿಸುತ್ತಿದ್ದರು. ಹಳ್ಳಿಯ ಜನ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಿರಲಿಲ್ಲ, ಅವರಿಗೆ ಕೃಷಿಕಾರ್ಯದಲ್ಲಿ ಸಹಾಯ ಮಾಡಲು ಮಕ್ಕಳು ಮನೆಯಲ್ಲಿ ಇರ ಬೇಕಾಗುತ್ತಿತ್ತು. ಒತ್ತಾಯದಿಂದ ೧೦-೧೨ (10-12) ಜನ ಒಂದೊಂದು ತರಗತಿಯಲ್ಲಿರುತ್ತಿದ್ದೆವು. ಒಟ್ಟಿನಲ್ಲಿ ೩೦ (30) ವಿದ್ಯಾರ್ಥಿನಿಯರಿದ್ದರೆ ಬಹಳ. ಆಗ ಸ್ಲೇಟು ಬಳಪದ ಕಾಲ. ಕೆಳಗಡೆ ಕುಳಿತುಕೊಂಡು ಬರದು ಓದಿ ಕಲಿಯುತ್ತಿದ್ದೆವು, ಕವಿತೆಗಳನ್ನು ರಾಗ ಬಧ್ಧವಾಗಿ ಹೇಳಿ ಬಾಯಿಪಾಠ ಮಾಡಿಸುತ್ತಿದ್ದರು. ಇವತ್ತಿಗೂ ಕೆಲವು ಮನದಲ್ಲಿ ಉಳಿದಿವೆ. ಲೇಝಿಮ್ನಲ್ಲಿ (lezim) ದೇಶ ಭಕ್ತಿ ಗೀತೆಗಳನ್ನು ಹಾಡುತ್ತ ಕುಣಿಯುತ್ತಿದ್ದೆವು. ‘ಮಾತ್ರ ಭೂಮಿ ಜನನಿ ನಿನ್ನ ಚರಣ ಸೇವೆ ಮಾಡುವಾ, ಪರಮ ಹರುಷದಿಂದ ನಿನ್ನ ಸುಖಕ್ಕೆ ಪ್ರಾಣ ನೀಡುವೆ‘. ಹಾಗೆ ಕೋಲಾಟದಲ್ಲಿ ಅನೇಕ ಗೀತೆಗಳನ್ನು ಕಲಿಸುತ್ತಿದ್ದರು. ದೌರ್ಭಾಗ್ಯದಿಂದ ಈಗ ಅವುಗಳೆಲ್ಲ ಮರೆತು ಹೋಗಿವೆ.
ನಮ್ಮ ಮನೆಯಲ್ಲಿ ಗೋಪಾಲಕೃಷ್ಣ ಗೋಖಲೆ, ಬಲಗಾಂಗಾಧರ ತಿಲಕ್, ಗಾಂಧೀಜಿ ಅವರದೆಲ್ಲ ಫೋಟೋಗಳನ್ನು ಹಾಕಿದ್ದರು. ದೊಡ್ಡವರು ಮನೆಯಲ್ಲಿ ಅನೇಕ ಗಂಭೀರ ವಿಷಯಗಳನ್ನು ಚರ್ಚಿಸುತ್ತಿದ್ದರು, ನಮಗೆ ಅವುಗಳೆಲ್ಲ ಅರ್ಥವಾಗುತ್ತಿರಲಿಲ್ಲ.
ಶನಿವಾರ ಬಿಳಿ ಬಟ್ಟೆಹಾಕಿಕೊಂಡು ಕೈಯಲ್ಲಿ ತ್ರಿರಂಗಾ ಬಾವುಟ ಹಿಡಿದು ಪ್ರಭಾತ್ ಫೇರಿ ಮಾಡುತ್ತ ಹಳ್ಳಿಯಲ್ಲಿ ಒಂದು ಸುತ್ತು ಹಾಕುತ್ತಿದ್ದೆವು, ಮುಂದೆ ನಮ್ಮ ಅಧ್ಯಾಪಕಿಯರಿರುತ್ತಿದ್ದರು. ಒಬ್ಬ ವಿದ್ಯಾರ್ಥಿನಿ ಜೋರಾಗಿ ‘ವಂದೇ’ ಎಂದು ಕೂಗುತ್ತಿದ್ದಳು, ನಾವೆಲ್ಲ ‘ಮಾತರಂ’ ಎಂದು ಕೂಗುತ್ತಿದ್ದೆವು. ಅವಳು ‘ಜೈ ಹಿಂದ್’ ಎನ್ನುತ್ತಿದ್ದಂತೆ ನಾವು ‘ಜೈ ಹಿಂದ್’ ಎಂದು ಕೂಗುತ್ತಿದ್ದೆವು. ಆಗ ‘ವಂದೇ ಮಾತರಂ’ ಹಾಡು ರಷ್ಟ್ರ ಗೀತೆಯಾಗಿತ್ತು. ಆಗ ಲೌಡ್ ಸ್ಪೀಕರ್ (loud speaker) ಆಗಲಿ, ಮೈಕ್ (mic) ಆಗಲಿ ಇರಲಿಲ್ಲ. ನಮ್ಮ ಲೀಡರ್ ಜೋರಾಗಿ, ‘ಭರತ್ ಮಾತಾ ಕಿ’ ಎಂದು ಕೂಗಿದರೆ ನಾವೆಲ್ಲಾ ‘ಜೈ’ ಎಂದು ಒಟ್ಟಿಗೆ ಕೂಗುತ್ತಿದ್ದೆವು. ‘ಮಹಾತ್ಮಾ ಗಾಂಧೀಜಿ ಕಿ’, ‘ಜೈ’ ಎಂದು ಕೂಗುತ್ತ ಸಾಗುತ್ತಿದ್ದೆವು.
ಆಗಸ್ಟ್ ೧೫, ೧೯೪೭ (August 15, 1947) ರಲ್ಲಿ ಎಲ್ಲರ ಕಾನಸು ನನಸಾಗುವ ಸ್ವಾತಂತ್ರದ ದಿನ ಬಂದೆ ಬಿಟ್ಟಿತು. ಎಲ್ಲರ ಮುಖದಲ್ಲಿ ಸಂತೋಷ, ಊರಿನಲ್ಲಿ ಎಲ್ಲಿಲ್ಲದ ಸಂಭ್ರಮ. ಊರಿನ ಮಧ್ಯದಲ್ಲಿ ಕಟ್ಟೆ ಕಟ್ಟಿ ಧ್ವಜ ವಂದನೆ ಕಾರ್ಯಕ್ರಮ ಸಿಧ್ಧಪಡಿಸಿದರು. ನನ್ನ ತಂದೆ ಊರಿಗೆ ಮುಖ್ಯಸ್ಥರಾದುದರಿಂದ ಅವರು ಧ್ವಜವನ್ನು ಏರಿಸಿದರು. ಧ್ವಜ ಏರಿಸಿ ವಂದನೆ ಮಾಡಿ ಎಲ್ಲರೂ ‘ವಂದೇ ಮಾತರಂ’ ಹಾಡು ಹೇಳಿ ‘ಜೈ ಹಿಂದ್’ ಎಂದು ಆನಂದದಿಂದ ಹೇಳಿದೆವು. ಆಮೇಲೆ, ಶಾಲಾ ಮಕ್ಕಳಿಂದ ಹಾಡು ಹಾಡಿಸಿದರು. ಆಗ ‘ಏರಿತು ಗಗನಕೆ ನಮ್ಮ ಧ್ವಜ ಭಾರತ ಭಾಗ್ಯೂದಯ ತೇಜ।’ ಎನ್ನುವ ಹಾಡನ್ನು ಹೇಳಲಾಯಿತು. ಎಲ್ಲರಿಗೂ ಸಿಹಿ ಹಂಚಿದ್ದಾಯಿತು.
ಇದಿಷ್ಟು ನನ್ನ ನೆನಪಿನಲ್ಲಿ ಉಳಿದಿರುವದನ್ನು ಬರೆದಿರುವೆ.
ಜೈ ಹಿಂದ್